ಮಿಯಾಮಿ
ಅಮೆರಿಕ ಸಂಯುಕ್ತ ಸಂಸ್ಥಾನಗಳ ಫ್ಲಾರಿಡ ರಾಜ್ಯದ ಒಂದು ಪ್ರಸಿದ್ಧ ವಿಹಾರ ಕೇಂದ್ರ. ರಾಜ್ಯದ ಆಗ್ನೇಯ ಭಾಗದಲ್ಲಿ ಬಿಸ್ಕೆನಿ ಕೊಲ್ಲಿಯಲ್ಲಿರುವ ಬಂದರು ನಗರ ಹಾಗೂ ಡೇಡ್  ಕೌಂಟಿಯ ಆಡಳಿತ ಕೇಂದ್ರ. 52 ಚಕಿಮೀ. ಒಳ ಜಲಪ್ರದೇಶವೂ ಸೇರಿ ಒಟ್ಟು ವಿಸ್ತೀರ್ಣ 140 ಚ ಕಿಮೀ. ನಗರ ಜನಸಂಖ್ಯೆ 3466,931(1980).

	ಆರ್ಥಿಕತೆ:  ಪ್ರವಾಸೋದ್ಯಮ ಮಿಯಾಮಿಯ ಆರ್ಥಿಕ ಜೀವನಾಡಿ. ಇಲ್ಲಿಯ ಸುಂದರ ಸಮುದ್ರ ತಾಣಗಳು. ಏಕಾಂತಕ್ಕೆ ಇರುವ ಅನುಕೂಲಕರ ಸನ್ನಿವೇಶಗಳು ಹಾಗೂ ಪ್ರವಾಸಿಗಳ ಸೌಲಭ್ಯಗಳು ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗಳನ್ನು ಇಲ್ಲಿಗೆ ಆಕರ್ಷಿಸುತ್ತವೆ. ನಗರ ಉಷ್ಣತೆ ಬೇಸಗೆಯಲ್ಲಿ 28(ಅ ಇದ್ದರೆ ಚಳಿಗಾಲದಲ್ಲಿ 19(ಅ ಇರುತ್ತದೆ. ಪ್ರವಾಸಿಗಳಿಗಾಗಿ ವಿಶೇಷ ವಸತಿ ಸೌಕರ್ಯಗಳು ಮತ್ತು ಮನರಂಜನ ಕೇಂದ್ರಗಳಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಮೂರು ಸಾವಿರಕ್ಕೂ ಹೆಚ್ಚು ಉದ್ಯಮಗಳು ಹುಟ್ಟಿಕೊಂಡಿವೆ. ಬಟ್ಟೆಗಳ ಉತ್ಪನ್ನದಲ್ಲಿ ನ್ಯೂಯಾರ್ಕ್ ನಗರ ಬಿಟ್ಟರೆ ಇದು ಅನಂತರದ್ದು. ಪೀಠೋಪಕರಣಗಳು, ಮುದ್ರಿತ ಸಾಮಗ್ರಿಗಳು ಮತ್ತು ಸಾಗಣೆ ಸಲಕರಣೆಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಇಲ್ಲಿ ದೊಡ್ಡ ರೈಲು ನಿಲ್ದಾಣವಿದೆ. ಇಲ್ಲಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಅಮೆರಿಕದ ಬೃಹತ್ ನಿಲ್ದಾಣಗಳಲ್ಲೊಂದು. 90ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ಈ ನಿಲ್ದಾಣವನ್ನು ಉಪಯೋಗಿಸಿಕೊಳ್ಳುತ್ತವೆ. ಮಿಯಾಮಿ ಬಂದರಿಗೆ ವಿವಿಧ ದೇಶಗಳಿಂದ ಸರಕುಸಾಗಣೆಯ ಮತ್ತು ಪ್ರಯಾಣಿಕರ ಹಡಗುಗಳು ಬರುತ್ತವೆ.

	ಶಿಕ್ಷಣ ಮತ್ತು ಜನಜೀವನ:  ಮಿಯಾಮಿ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂಜಾತರು. ಇನ್ನು ಸುಮಾರು 1/3 ಭಾಗ ಜನರು ಕ್ಯೂಬನರು. ಇವರು 1960ರ ದಶಕದಲ್ಲಿ ಕ್ಯೂಬ ಕಮ್ಯೂನಿಸ್ಟ್ ಆಡಳಿತಕ್ಕೆ ಒಳಪಟ್ಟಾಗ ವಲಸೆ ಬಂದವರು. ಇವರಲ್ಲದೆ ಜರ್ಮನ್, ಇಟಾಲಿಯನ್ ಮತ್ತು ರಷ್ಯ ಮೂಲದ ಜನರು ಗಣನೀಯವಾಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 25 ಭಾಗ ನೀಗ್ರೋಗಳಿದ್ದಾರೆ. ಬಾಪ್ಟಿಸ್ಟ್ ಇಲ್ಲಿಯ ದೊಡ್ಡ ಧಾರ್ಮಿಕ ಪಂಥ. ಇಲ್ಲಿ ಹಲವಾರು ಸರ್ಕಾರಿ ಮತ್ತು ಚರ್ಚ್ ಆಶ್ರಿತ ಶಾಲಾ ಕಾಲೇಜುಗಳಿವೆ. ಮಿಯಾಮಿ ವಿಶ್ವವಿದ್ಯಾಲಯ, ಸಾಗರ ಮತ್ತು ವಾತಾವರಣ ಅಧ್ಯಯನ ಸಂಸ್ಥೆ, ಸಾರ್ವಜನಿಕ ಗ್ರಂಥಾಲಯದ 18 ಶಾಖೆಗಳು; ಮನರಂಜನೆಗೆ ಅಪೆರಾ ಕಂಪನಿ ಇವೆ. ಕಲಾಮಂದಿರಗಳು ಮತ್ತು ಕಲಾವಸ್ತುಸಂಗ್ರಹಾಲಯಗಳಿವೆ. ಕ್ರಾನ್‍ಡನ್ ಪಾರ್ಕ್ ಮೃಗಧಾಮವಿದೆ. ವಿಜ್ಞಾನ ಮತ್ತು ಪ್ರಾಕೃತಿಕ ವಸ್ತುಸಂಗ್ರಹಾಲಯ ಮತ್ತು ಮತ್ಸ್ಯಾಗಾರ ಮುಂತಾದವುಗಳಿವೆ.

	ಸರ್ಕಾರ:  ಮೆಟ್ರೊಪಾಲಿಟನ್ ಕೌಂಟಿ ಇಲ್ಲಿಯ ಆಡಳಿತ ನಡೆಸುತ್ತವೆ. ಚುನಾವಣೆ ಮೂಲಕ ಆಯ್ಕೆಯಾದ ಡೇಟ್ ಕೌಂಟಿಯ ಕಮಿಷನರ ಮಂಡಳಿ ಇದೆ. ಈ ಮಂಡಳಿ ಆಡಳಿತ 1957ರಿಂದ ಪ್ರಾರಂಭವಾದದ್ದು. ಇದು ಸಂಯುಕ್ತ ಸಂಸ್ಥಾನಗಳಲ್ಲೇ ಮೊದಲನೆಯ ಮೆಟ್ರೊಪಾಲಿಟನ್ ಸರ್ಕಾರವಾಗಿದೆ.

	ಇತಿಹಾಸ:  ಮೊದಲಿಗೆ ಇದು ರೆಡ್ ಇಂಡಿಯನ್ನರ ವಾಸಸ್ಥಳ. 1895ರಲ್ಲಿ ಜೂಲಿಯ ಡಿ ಟೂಲ್ಟೆ ಎಂಬಾಕೆ ಆಗ ರೈಲು ಮಾರ್ಗ ನಿರ್ಮಿಸುತ್ತಿದ್ದ ಹೆನ್ರಿ ಎಂ. ಫ್ಲಾಗ್‍ಲರ್ ಎಂಬವರಿಗೆ ಮಿಯಾಮಿ ವ್ಯವಸಾಯಯೋಗ್ಯ ಪ್ರದೇಶವೆಂದು ತಿಳಿಸಿದಳು. 1896ರಲ್ಲಿ ಫ್ಲಾಗ್‍ಲರ್ ಫ್ಲಾರಿಡದ ಪೂರ್ವ ತೀರ ರೈಲುಮಾರ್ಗವನ್ನು ಈಗಿನ ಮಿಯಾಮಿವರೆಗೆ ವಿಸ್ತರಿಸಿದರು. ಅದೇ ವರ್ಷ ಮಿಯಾಮಿಯನ್ನೂ ಸ್ಥಾಪಿಸಿ ನಗರ ಮಾನ್ಯತೆಯೂ ದೊರೆಯಿತು. 1920ರ ದಶಕದಲ್ಲಿ ಮಿಯಾಮಿ ದೊಡ್ಡ ನಗರವಾಗಿ ಬೆಳೆಯತೊಡಗಿತು. ಇಲ್ಲಿಯ ಸುಂದರ ಸಮುದ್ರ ತೀರ ಮತ್ತು ಹವೆ ಪ್ರವಾಸಿಗಳನ್ನು ಆಕರ್ಷಿಸಿದುವು. ದಿನನಿತ್ಯ ಸಾವಿರಾರು ಪ್ರವಾಸಿಗರು ಬರತೊಡಗಿದರು. ಪೈಪೋಟಿಯಿಂದ ವಸತಿಗೃಹಗಳು ಮತ್ತು ವಿಹಾರ ತಾಣಗಳನ್ನೂ ನಿರ್ಮಿಸಲಾಯಿತು. ನಗರ ದಿನೆದಿನೇ ಪ್ರವರ್ಧಮಾನಕ್ಕೆ ಬಂದಿತು. 

	ಮಿಯಾಮಿ ಬೀಚ್: ಮಿಯಾಮಿ ನಗರಕ್ಕೆ 4 ಕಿಮೀ ದೂರದಲ್ಲಿ ಮಿಯಾಮಿ ಸಮುದ್ರತೀರ ಇವೆ. 16 ಕಿಮೀ ಉದ್ದ ಮತ್ತು 1.6ರಿಂದ 5 ಕಿಮೀ ಅಗಲವಿರುವ ಈ ಸಮುದ್ರತೀರ ಉತ್ತರ ಅಮೆರಿಕದ ಪ್ರಸಿದ್ಧ ವಿಹಾರ ಸ್ಥಳ. ಇಲ್ಲಿಗೆ ಲಕ್ಷಾಂತರ ಪ್ರವಾಸಿಗಳು ಬಂದು ಹೋಗುತ್ತಾರೆ. ಏಕಕಾಲದಲ್ಲಿ ಎರಡು ಲಕ್ಷ ಜನರಿಗೆ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಇಲ್ಲಿದೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ